ಕುಮಾರಿ ಜಯಲಲಿತಾ ಅವರಿಗೆ ಮಗಳಿದ್ದಾರೆಯೇ?

ಬೆಂಗಳೂರಿನ ಅಮೃತಾ ಸಾರಥಿ ಎಂಬುವವರು ತಾವು ಜಯಲಲಿತಾ ಅವರ ಮಗಳು ಎಂದು ಸಾಬೀತುಪಡಿಸಲು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಾಣ ತ್ಯಜಿಸಿ ಸುಮಾರು ಒಂದು ವರ್ಷವಾಗಿದೆ. ಮದುವೆ ಆಗದೆ ಇದ್ದಿದ್ದರಿಂದ ಜಯಲಲಿತಾ ಅವರನ್ನು ಕೊನೆಯವರೆಗೂ ಕುಮಾರಿ ಎಂದೇ ಕರೆಯಲಾಗುತ್ತಿತ್ತು. ಆದರೆ ಈಗ ಬೆಂಗಳೂರಿನ 37 ವರ್ಷದ ಅಮೃತ ಸಾರಥಿ ಎಂಬ ಮಹಿಳೆ ತಾವು ಜಯಲಲಿತಾರ ಮಗಳು ಎಂದು ಹೇಳಿಕೊಳ್ಳುತ್ತಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಅಮೃತಾ ಅವರು ಜಯಲಲಿತಾ ಶವವನ್ನು ಹೊರತೆಗೆದು DNA ಪರೀಕ್ಷೆ ಮಾಡಿ ತಮ್ಮ ಹೇಳಿಕೆಯನ್ನು ಸಾಬೀತು ಮಾಡಬೇಕೆಂದು ಕೋರಿಕೊಂಡಿದ್ದಾರೆ. ಹಾಗೂ ಜಯಲಲಿತಾ ಶವವನ್ನು ವೈಷ್ಣವ ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಬೇಕೆಂದು ಕೋರಿದ್ದಾರೆ. ಆದರೆ ಸುಪ್ರೀಂಕೋರ್ಟ್ ಅಮೃತಾ ಅವರ ಅರ್ಜಿಯನ್ನು ತಿರಸ್ಕರಿಸಿದ್ದು, ಮದ್ರಾಸ್ ಹೈಕೋರ್ಟ್ ನಲ್ಲಿ ಅವರ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ.

ಅಮೃತಾರ ತಾಯಿ ಶೈಲಜಾ ಸಾರಥಿ ಅವರು ಕೂಡ 2014ರಲ್ಲಿ ತಾವು ಜಯಲಲಿತಾ ತಂಗಿ ಎಂದು ಹೇಳಿಕೆ ನೀಡಿದ್ದರು. ಜಯಲಲಿತಾರ ತಾಯಿ ಸಂಧ್ಯಾವಂದನೆ ಅವರು ತಮ್ಮನ್ನು ಸಾಕಲು ಕಲಾ ನಿರ್ದೇಶಕ ದಾಮೋದರ ಪಿಳ್ಳೈ ಅವರ ಮಗನಿಗೆ ನೀಡಿದ್ದರು ಹಾಗೂ ಸಂಧ್ಯಾ ಅವರು ನನ್ನನ್ನು ಆಗಾಗ ಭೇಟಿ ಮಾಡುತ್ತಿದ್ದರು ಎಂದು ಶೈಲಜಾ ಹೇಳಿದ್ದರು. ಆದರೆ ಇದನ್ನು ದೃಢಪಡಿಸಲು ಅವರು ಯಾವುದೇ ಸಾಕ್ಷ್ಯ ಒಡಗಿಸಿರಲಿಲ್ಲ ಮತ್ತು ಆಗಿನ ಅವರ ಮಗಳು ಅಮೃತಾ ಅವರು ಜಯಲಲಿತಾ ಮಗಳು ಎಂದು ಹೇಳಿರಲಿಲ್ಲ. ಈಗ ಅಮೃತಾ ತಾಯಿ ಶೈಲಜಾ ಹಾಗು ತಂದೆ ಸಾರಥಿ ಇಬ್ಬರೂ ನಿಧನರಾಗಿದ್ದಾರೆ.

ಅರ್ಜಿಯಲ್ಲಿ ಅಮೃತಾ ಅವರು ಜಯಲಲಿತಾ ನಿಧನದ ನಂತರ ತಾವು ಅವರ ಮಗಳೆಂದು ಸಂಬಂಧಿಕರಿಂದ ತಿಳಿಯಿತು, 1980ರಲ್ಲಿ ಜಯಲಲಿತಾರ ಚೆನ್ನೈ ಮನೆಯಲ್ಲಿ ತಾವು ಜನಿಸಿದ್ದರೆಂದು ಹೇಳಿದ್ದಾರೆ. ತಾವು ವಿವಾಹೇತರ ಮಗುವಾಗಿದ್ದರಿಂದ ತಮ್ಮನ್ನು ಈಗಿನ ತಂದೆ ತಾಯಿಯರಿಗೆ ಸಾಕಲು ನೀಡಿ, ಈ ವಿಷಯ ಯಾರಿಗೂ ತಿಳಿಯಬಾರದೆಂದು ದೇವರ ಮುಂದೆ ಪ್ರಮಾಣ ಮಾಡಲಾಗಿತ್ತು ಎಂದಿದ್ದಾರೆ.

ಅಮೃತಾ ಅವರು “ಜಯಲಲಿತಾರನ್ನು ನಾನು ಹಲವು ಬಾರಿ ಭೇಟಿ ಮಾಡಿದ್ದು, ನನ್ನನ್ನು ಮಗಳಂತೆಯೇ ಕಾಣುತ್ತಿದ್ದರು. ಅವರೇ ನನಗೆ AIADMK ಸದಸ್ಯತ್ವ ಕೊಡಿಸಿದ್ದರು. ಆದರೆ ಕಳೆದ ವರ್ಷ ಅಪೋಲೊ ಆಸ್ಪತ್ರೆಯಲ್ಲಿ ಜಯಲಲಿತಾ ಚಿಕಿತ್ಸೆ ಪಡೆಯುತ್ತಿದ್ದಾಗ ಅವರನ್ನು ಕಾಣಲು ಶಶಿಕಲಾ ಕಡೆಯವರು ನನಗೆ ಬಿಡಲಿಲ್ಲ”  ಎಂದು ಹೇಳಿದ್ದಾರೆ.

ಜಯಲಲಿತಾ ಅವರ ತಮ್ಮನ ಮಗಳು ದೀಪಾ ಜಯಕುಮಾರ್ ಅವರು ಈ ಹೇಳಿಕೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅಮೃತಾ ಅವರು ಹೇಳುತ್ತಿರುವುದೆಲ್ಲ ಸುಳ್ಳು, ನಾನು ಇದುವರೆಗೂ ಅವರನ್ನು ನೋಡಿಯೇ ಇಲ್ಲ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಶಶಿಕಲಾ ಕಡೆಯವರು ತಮ್ಮ ಕುಟುಂಬದಲ್ಲಿ ಗೊಂದಲ ಮೂಡಿಸಲು ಇದನ್ನೆಲ್ಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬ್ರಿಟನ್ ರಾಜಕುಮಾರ ಹ್ಯಾರಿ ಮದುವೆ ನಿಶ್ಚಯ

ಇಂಗ್ಲೆಂಡ್ ರಾಜಕುಮಾರ ಹ್ಯಾರಿ ಅವರು ಅಮೇರಿಕನ್ ನಟಿ ಮೇಗನ್ ಮಾರ್ಕಲ್ ಅವರಿಗೆ ಉಂಗುರ ತೊಡಿಸಿದ್ದು, 2018ರಲ್ಲಿ ಮದುವೆ ಆಗಲಿದ್ದಾರೆ.

33 ವರ್ಷದ ಬ್ರಿಟನ್ ರಾಜಕುಮಾರ ಹ್ಯಾರಿ ಅವರು ಕೊನೆಗೂ ಮದುವೆಯಾಗಲು ನಿರ್ಧರಿಸಿದ್ದಾರೆ. ಒಂದು ವರ್ಷದಿಂದ ಅವರು ಹಾಲಿವುಡ್ ನಟಿ ಮೇಗನ್ ಮಾರ್ಕಲ್ ಅವರ ಜೊತೆ ವಿವಾಹವಾಗುತ್ತಾರೆಂಬ ಸುದ್ದಿ ನಿಜವಾಗಿದೆ. ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದು ಸೋಮವಾರ ಅಧಿಕೃತವಾಗಿ ಒಟ್ಟಾಗಿ ಕಾಣಿಸಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಈ ಮೊದಲು ಜೋಡಿಯ ನಿಶ್ಚಿತಾರ್ಥವನ್ನು ಇಂಗ್ಲೆಂಡಿನ ಅರಮನೆಯವರು ಅಧಿಕೃತವಾಗಿ ದೃಢಪಡಿಸಿದ್ದರು. ಅರಮನೆಯ ಅಧಿಕೃತ ಹೇಳಿಕೆಯಂತೆ ಹ್ಯಾರಿ ಹಾಗೂ ಮೇಗನ್ ಅವರು ಈ ತಿಂಗಳ ಮೊದಲಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, 2018ರ ಬೇಸಿಗೆಯಲ್ಲಿ ಮದುವೆಯಾಗಲು ನಿಶ್ಚಯಿಸಿದ್ದಾರೆ. ಈ ವಿವಾಹಕ್ಕೆ ಕುಟುಂಬದವರ ಹಾಗೂ ರಾಣಿ ಎಲಿಜಬೆತ್ ಅವರ ಸಹಮತವಿದ್ದು, ಮದುವೆ ನಂತರ ಜೋಡಿಯು ಕೆನ್ಸಿಂಗ್ಟೊನ್ ಅರಮನೆಯಲ್ಲಿ ನೆಲೆಸಲಿದ್ದಾರೆ.

36 ವರ್ಷದ ಮೇಗನ್ ಮಾರ್ಕಲ್ ಅವರು ಅಮೆರಿಕಾದಲ್ಲಿ ಪ್ರಸಾರವಾಗುವ ‘ಸೂಟ್ಸ್’ ಟಿವಿ ಸರಣಿಯ ನಟಿ ಹಾಗೂ ಒಂದು ಬಾರಿ ವಿವಾಹವಾಗಿ ವಿಚ್ಛೇದನ ಪಡೆದಿದ್ದಾರೆ. ಅಮೇರಿಕನ್ ತಂದೆ ಹಾಗೂ ಆಫ್ರಿಕನ್-ಅಮೆರಿಕನ್ ತಾಯಿಗೆ ಜನಿಸಿರುವ ಮೇಗನ್ ಅವರು ತಮ್ಮ ಮಿಶ್ರ ಜನನದ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸುತ್ತಾರೆ.

ಇಬ್ಬರಿಗೂ ಪರಿಚಯವಿರುವ ಸ್ನೇಹಿತೆಯ ಮೂಲಕ ಭೇಟಿಯಾದ ಹ್ಯಾರಿ ಹಾಗು ಮೇಗನ್ ಅವರು ಜೂನ್ 2016ರಿಂದ ಒಟ್ಟಾಗಿದ್ದಾರೆ. ಇಬ್ಬರೂ ಜೊತೆಯಾಗಿರುವ ಸುದ್ದಿಯಾಗುತ್ತಿದ್ದಂತೆ ಮೇಗನ್ ಅವರ ಮಿಶ್ರ ಜನನದ ಬಗ್ಗೆ ನಿಂದನೆ ಹಾಗು ಅವಹೇಳನ ಮಾಡಿದವರ ವಿರುದ್ಧ ರಾಜಕುಮಾರ ಹ್ಯಾರಿ ಖಂಡಿಸಿ ಹೇಳಿಕೆ ನೀಡಿದ್ದರು. ನಂತರ ಹಲವು ಕಾರ್ಯಕ್ರಮಗಳಲ್ಲಿ ಜೋಡಿಯು ಒಟ್ಟಾಗಿ ಕಾಣಿಸಿಕೊಂಡಿದ್ದರು.

ಮದುವೆಯ ನಂತರ ಮೇಗನ್ ಅವರು ನಟನೆಗೆ ವಿದಾಯ ಹೇಳಲಿದ್ದು, ಮಾನವಹಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ಜೋಡಿಯ ನಿಶ್ಚಿತಾರ್ಥಕ್ಕೆ ಬ್ರಿಟನ್ ರಾಜಮನೆತನದವರು ಹರ್ಷ ವ್ಯಕ್ತಪಡಿಸಿದ್ದು, ಹ್ಯಾರಿ ಹಾಗೂ ಮೇಗನ್ ಅವರಿಗೆ ಶುಭ ಕೋರಿದ್ದಾರೆ.

ಗ್ಯಾಲಪಾಗೋಸ್ ದ್ವೀಪದಲ್ಲಿ ಹೊಸ ಪಕ್ಷಿ ಸಂಕುಲದ ಉಗಮ

ಡಾರ್ವಿನ್ ನ ವಿಕಾಸವಾದವನ್ನು ಪುಷ್ಟೀಕರಿಸುವಂತೆ ಹೊಸದಾಗಿ ಪಕ್ಷಿ ಸಂಕುಲ ಉದಯಿಸಿದ್ದು ಮೊದಲ ಬಾರಿ ವಿಜ್ಞಾನಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ.

ಮಂಗನಿಂದ ಮಾನವ ಹುಟ್ಟಿದ್ದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಚಾರ್ಲ್ಸ್ ಡಾರ್ವಿನ್ ವಿಕಾಸವಾದವನ್ನು ಮಂಡಿಸಿದಾಗ ನಂಬಲು ಅಸಾಧ್ಯವಾದರೂ ಕಾಲಕ್ರಮೇಣ ದೊರೆತ ಪಳೆಯುಳಿಕೆಗಳಿಂದ ಡಾರ್ವಿನ್ ಸಿದ್ಧಾಂತ ಸಾಬೀತಾಯಿತು. ಸಮುದ್ರದಲ್ಲಿ ಹುಟ್ಟಿದ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಮನುಷ್ಯನವರೆಗೆ ಜೀವಗಳು ವಿಕಾಸವಾಗಿರುವುದು ಪ್ರಕೃತಿಯ ಬಹು ದೊಡ್ಡ ಅಚ್ಚರಿ!

ಇಲ್ಲಿಯವರೆಗೆ ಕೇವಲ ಪಳೆಯುಳಿಕೆಗಳನ್ನು ಅಭ್ಯಸಿಸುತ್ತಿದ್ದರೆ ಈಗ ಕಣ್ಮುಂದೆಯೇ ಹೊಸ ಪಕ್ಷಿ ಸಂಕುಲವೊಂದು ಉದಯಿಸಿರುವುದು ಡಾರ್ವಿನ್ ಸಿದ್ಧಾಂತಕ್ಕೆ ನೇರ ಪುರಾವೆ ಒಡಗಿಸಿದಂತಾಗಿದೆ. ಅದರಲ್ಲೂ ಮನುಷ್ಯನ ಕೇವಲ ಎರಡು ತಲೆಮಾರುಗಳಷ್ಟರಲ್ಲಿ ಈ ಪ್ರಕ್ರಿಯೆ ನಡೆದಿದೆ.

ಗ್ಯಾಲಪಾಗೋಸ್ ದ್ವೀಪಗಳಲ್ಲಿ ಡಾರ್ವಿನ್ ಫಿಂಚ್ ಎಂಬ ಪಕ್ಷಿ ಪ್ರಭೇದವಿದೆ. ಈ ಪಕ್ಷಿಗಳನ್ನು ಅಧ್ಯಯನ ಮಾಡಿಯೇ ಡಾರ್ವಿನ್ ಪ್ರಾಕೃತಿಕ ಆಯ್ಕೆ ಸಿದ್ಧಾಂತವನ್ನು ಮಂಡಿಸಿದ್ದು, ಹಾಗಾಗಿಯೇ ಆ ಪಕ್ಷಿಗಳಿಗೆ ಡಾರ್ವಿನ್ ಫಿಂಚ್ ಎಂಬ ಹೆಸರು. ಪ್ರಾಕೃತಿಕ ಆಯ್ಕೆ ಸಿದ್ಧಾಂತದ ಪ್ರಕಾರ ಸುತ್ತಲಿನ ಪರಿಸರಕ್ಕೆ ಹೆಚ್ಚು ಹೊಂದಿಕೊಳ್ಳುವ ಸಂಕುಲ ನಾಶವಾಗದೆ ಉಳಿಯುತ್ತದೆ.

ಗ್ಯಾಲಪಾಗೋಸ್ ದ್ವೀಪಗಳಲ್ಲಿ ಕನಿಷ್ಟ ಹದಿನೈದು ಬಗೆಯ ಡಾರ್ವಿನ್ ಫಿಂಚ್ ಪ್ರಭೇದಗಳಿವೆ. ಅದರಲ್ಲಿ ಎರಡು ಪ್ರಭೇದಗಳ ಮಿಶ್ರಣದಿಂದ ಹೊಸ ಪಕ್ಷಿ ಸಂಕುಲ ವಿಕಾಸವಾಗಿದ್ದು ಅವಕ್ಕೆ ವಿಜ್ಞಾನಿಗಳು Big bird ಎಂದು ಹೆಸರಿಟ್ಟಿದ್ದಾರೆ.

ಹೊಸದಾಗಿ ಹುಟ್ಟಿರುವ ಪಕ್ಷಿಗಳ ಧ್ವನಿ, ದೇಹದ ಆಕಾರ ಮತ್ತು ಕೊಕ್ಕಿನ ಅಳತೆ ಉಳಿದವುಗಳಿಗಿಂತ ಭಿನ್ನವಾಗಿದೆ. ಅವುಗಳ ದೇಹವು ಬೇರೆ ಡಾರ್ವಿನ್ ಫಿಂಚ್ ಪಕ್ಷಿಗಳಿಗಿಂತ ದೊಡ್ಡದಾಗಿರುವುದರಿಂದ Big bird ಎಂದು ಕರೆಯಲಾಗಿದೆ. ಈ ದೇಹವೇ ಅವಕ್ಕೆ ವರವಾಗಿ ಪರಿಣಮಿಸಿದ್ದು, ಬೇರೆ ಪಕ್ಷಿಗಳಿಗಿಂತ ಹೆಚ್ಚು ಆಹಾರ ಹುಡುಕಲು ಸಾಧ್ಯವಾಗಿದೆ. ಹೀಗಾಗಿ ಇವುಗಳ ಸಂಖ್ಯೆ ದ್ವೀಪದಲ್ಲಿ ಹೆಚ್ಚುತ್ತಿದೆ.

ಬಾಲಿವುಡ್ ತಾರೆಯರನ್ನು ಕಾಡಿದ ಮಾನಸಿಕ ಖಿನ್ನತೆ

ಮಾನಸಿಕ ಅಸ್ವಸ್ಥತೆಯನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದ್ದ ಕಾಲ ಈಗ ಬದಲಾಗಿದ್ದು, ಬಾಲಿವುಡ್ ನಲ್ಲಿ ಹಲವು ಖ್ಯಾತನಾಮರು ಸ್ವತಃ ತಾವೇ ಖಾಯಿಲೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ.

ಸಿನಿಮಾ ರಂಗ ಪ್ರವೇಶಿಸಲು ಪ್ರತಿದಿನ ಸಾವಿರಾರು ಮಂದಿ ಹರಸಾಹಸ ಪಡುತ್ತಾರೆ. ಕೆಲವರಿಗೆ ಅವಕಾಶ ಸಿಕ್ಕರೆ, ಹಲವರಿಗೆ ಅವಕಾಶವೇ ಸಿಗುವಿದಿಲ್ಲ. ಅವಕಾಶ ಸಿಕ್ಕಿದವರಲ್ಲೂ ಬೆರಳಣಿಕೆಯಷ್ಟು ಮಂದಿ ಮಾತ್ರ ಗೆಲ್ಲುತ್ತಾರೆ. ಸತತವಾಗಿ ಸಿನಿಮಾ ಗೆದ್ದರಷ್ಟೇ ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯ.

ಪ್ರಪಂಚದಲ್ಲಿ ಅತಿ ಹೆಚ್ಚು ಚಲನಚಿತ್ರ ನಿರ್ಮಾಣವಾಗುವುದು ಭಾರತದಲ್ಲಿ. ಅದರಲ್ಲೂ ಹಿಂದಿ ಚಿತ್ರರಂಗ ಭಾರತದಲ್ಲೇ ದೊಡ್ಡದು. ಅಲ್ಲಿನ ಟಾಪ್ ನಟ ನಟಿಯರು ಆಗಾಗ ಬದಲಾಗುತ್ತಲೇ ಇರುತ್ತಾರೆ. ತಮ್ಮ ತಾರಾ ವರ್ಚಸ್ಸನ್ನು ಉಳಿಸಿಕೊಳ್ಳಲು ಸದಾ ಹೆಣಗುತ್ತಿರುತ್ತಾರೆ. ಬಹಿರಂಗವಾಗಿ ನಗು ಮುಖವಿದ್ದರೂ ಮನಸ್ಸಿನಲ್ಲಿ ಅತೀವ ಉದ್ವೇಗ, ಆತಂಕಕ್ಕೆ ಒಳಗಾಗುತ್ತಿರುತ್ತಾರೆ.

ಬಹುತೇಕ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಮಾನಸಿಕ ಖಿನ್ನತೆ ಆವರಿಸುವುದು ಸಹಜ. ಇದಕ್ಕೆ ನಟ ನಟಿಯರೂ ಹೊರತಲ್ಲ. ಮಾನಸಿಕ ಖಾಯಿಲೆಗಳ ಬಗ್ಗೆ ಹೇಳಿಕೊಂಡರೆ ಸಾರ್ವಜನಿಕವಾಗಿ ತಮ್ಮ ವರ್ಚಸ್ಸು ಕುಂದುತ್ತದೆ ಎಂಬ ಕಾರಣಕ್ಕೆ ಇದರ ಕುರಿತು ತಾರೆಯರು ಹೇಳಿಕೊಳ್ಳುವುದಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಬಹಳಷ್ಟು ಬಾಲಿವುಡ್ ಮಂದಿ ಖಿನ್ನತೆಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದು, ಅವರ ಪಟ್ಟಿ ಇಲ್ಲಿದೆ.

  1. ದೀಪಿಕಾ ಪಡುಕೋಣೆ – ಬಾಲಿವುಡ್ ಬಹು ಬೇಡಿಕೆಯ ನಟಿ ದೀಪಿಕಾ ಅವರು ತಾವು ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ತಾವು ಖಿನ್ನತೆಗೆ ಒಳಗಾಗಿದ್ದನ್ನು ಹಂಚಿಕೊಂಡಿದ್ದರು. ತಮ್ಮ ಕುಟುಂಬದವರ ನಿರಂತರ ಬೆಂಬಲದಿಂದ ಚಿಕಿತ್ಸೆ ಪಡೆದು ಖಿನ್ನತೆಯಿಂದ ಹೊರಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಈಗವರು ಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ.
  2. ಅನುಷ್ಕಾ ಶರ್ಮಾ – ಅನುಷ್ಕಾ ಅವರು ಒಂದು ಸಂದರ್ಶನದಲ್ಲಿ ತಾವು ಉದ್ವೇಗ ಹಾಗೂ ಖಿನ್ನತೆಗೊಳಗಾಗಿ, ಅದಕ್ಕಾಗಿ ವೈದ್ಯಕೀಯ ನೆರವು ಪಡೆದಿದ್ದನ್ನು ಹೇಳಿದ್ದಾರೆ. ದೈಹಿಕ ಸಮಸ್ಯೆಗಳಂತೆಯೇ ಮಾನಸಿಕ ಸಮಸ್ಯೆಗಳು ಸಹಜ ಹಾಗೂ ಅವನ್ನು ಹೇಳಿಕೊಳ್ಳಲು ಜನರು ಹಿಂಜರಿಯಬಾರದು  ಎಂದು ಅವರು ಹೇಳುತ್ತಾರೆ.
  3. ಕರಣ್ ಜೋಹರ್ – ಈಗಷ್ಟೇ ಎರಡು ಅವಳಿ ಮಕ್ಕಳ ತಂದೆಯಾಗಿರುವ ಕರಣ್ ಅವರು ತಾವು ಹಿಂದೆ ಖಿನ್ನತೆಯಿಂದ ಬಳಲಿದ್ದಾಗಿ ಹೇಳಿದ್ದಾರೆ. ತಾವು ಒಮ್ಮೆ ಬಹಳ ಉದ್ವೇಗಕ್ಕೊಳಗಾದಾಗ ಹೃದಯಾಘಾತ ಆಗುತ್ತಿದೆ ಎಂದು ಭಾವಿಸಿದ್ದೆ ಎಂದಿದ್ದಾರೆ. ಈಗ ಆರೋಗ್ಯವಾಗಿರುವ ಕರಣ್ ಅವರು ಮಾನಸಿಕ ಖಾಯಿಲೆಗಳನ್ನು ಹೇಳಿಕೊಳ್ಳಲು ತಮ್ಮೊಂದಿಗೆ ಯಾರಾದರೂ ಹತ್ತಿರದವರು ಇರಬೇಕು ಎಂದು ಹೇಳುತ್ತಾರೆ.
  4. ಶಾರುಖ್ ಖಾನ್ – 2010ರಲ್ಲಿ ಭುಜದ ಶಸ್ತ್ರಚಿಕಿತ್ಸೆ ಆದ ನಂತರ ತಾವು ಖಿನ್ನರಾಗಿದ್ದರೆಂದು ಶಾರುಖ್ ಹೇಳಿದ್ದಾರೆ. ಅವರು ಸಮಸ್ಯೆಯಿಂದ ಮುಕ್ತರಾಗಿ ಈಗ ಸಂತೋಷ ಹಾಗೂ ಲವಲವಿಕೆಯಿಂದ ಇದ್ದಾರೆ.
  5. ಮೋನಿಷ ಕೊಯಿರಾಲ – ಬಹಳ ಕಾಲ ಕ್ಯಾನ್ಸರ್ ಖಾಯಿಲೆಯಿಂದ ಬಳಲಿ ಗುಣಮುಖರಾದ ಮೋನಿಷ ಅವರು ತದನಂತರ ಸಹಜವಾಗಿ ಖಿನ್ನತೆಯಿಂದ ಬಳಲಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದದ್ದು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.
  6. ಇಲಿಯಾನ ಡಿಕ್ರೂಜ್ – ಉದ್ವೇಗ ಹಾಗೂ ಖಿನ್ನತೆಗೋಳಗಾಗಿದ್ದನ್ನು ಹೇಳಿಕೊಂಡಿರುವ ಇಲಿಯಾನ ಅವರು ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ. ಮಾನಸಿಕ ಸಮಸ್ಯೆಗಳನ್ನು ಎದುರಿಸಲು ಕುಟುಂಬದವರ ಬೆಂಬಲ ಬಹಳ ಅಗತ್ಯ ಎಂದವರು ಹೇಳುತ್ತಾರೆ.
  7. ಟೈಗರ್ ಶ್ರಾಫ್ – ತಮ್ಮ ಮೂರನೇ ಚಿತ್ರ ಫ್ಲೈಯಿಂಗ್ ಜಾಟ್ ಸೋತಾಗ, ಸೋಲನ್ನು ಒಪ್ಪಿಕೊಳ್ಳಲಾಗದೆ ಟೈಗರ್ ಅವರು ನೊಂದಿದ್ದರು. ಆದರೆ ಮುಂದಿನ ಚಿತ್ರದಲ್ಲಿ ಕೆಲಸ ಮಾಡುತ್ತಾ ಅವರು ಖಿನ್ನತೆಯಿಂದ ಹೊರಬಂದಿದ್ದಾಗಿ ಹೇಳಿದ್ದಾರೆ.

ಹೀಗೆ ಬಹಳಷ್ಟು ತಾರೆಯರು ಸಮಸ್ಯೆಗಳಿಂದ ಹೊರಬಂದಿದ್ದಾರೆ. ಆದರೆ ಕೆಲವು ನತದೃಷ್ಟರು ಹೊರಬರಲಾರದೆ ಪ್ರಾಣ ತೆಗೆದುಕೊಂಡದ್ದು ಇದೆ. ಅದಕ್ಕೆ ಉದಾಹರಣೆ ಜಿಯಾ ಖಾನ್ ಹಾಗೂ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ. ಮಾನಸಿಕ ಸಮಸ್ಯೆಗಳಿಂದ ಹೊರಬರಲು ಕುಟುಂಬದವರ ಸಹಕಾರ ಅತ್ಯಗತ್ಯ.

ಚಕ್ ದೇ ನಟಿಯನ್ನು ವರಿಸಿದ ಜಹೀರ್ ಖಾನ್

ಖ್ಯಾತ ಬೌಲರ್ ಜಹೀರ್ ಖಾನ್ ಹಾಗೂ ಚಕ್ ದೇ ಸಿನಿಮಾ ನಟಿ ಸಾಗರಿಕಾ ಘಟ್ಗೆ  ಅವರು ಗುರುವಾರ ವಿವಾಹವಾಗಿದ್ದಾರೆ.

ಭಾರತದ ಮಾಜಿ ಕ್ರಿಕೆಟ್ ಆಟಗಾರ ಜಹೀರ್ ಖಾನ್ ಅವರು ನಟಿ ಸಾಗರಿಕಾ ಘಟ್ಗೆ ಅವರನ್ನು ಮುಂಬೈನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಬ್ಬರು ರಿಜಿಸ್ಟರ್ ವಿವಾಹವಾಗಿದ್ದು, ನಂತರ ನಡೆದ ಔತಣ ಕೂಟದಲ್ಲಿ ಕ್ರಿಕೆಟ್ ಹಾಗೂ ಸಿನಿಮಾ ಲೋಕದ ಖ್ಯಾತನಾಮರು ಭಾಗಿಯಾಗಿದ್ದರು.

ತಮ್ಮ ಸಂಬಂಧದ ಬಗ್ಗೆ ಮಾಧ್ಯಮಗಳಿಂದ ಗುಟ್ಟು ಕಾಪಾಡಿಕೊಂಡಿದ್ದ ಜಹೀರ್ ಹಾಗೂ ಸಾಗರಿಕಾ ಅವರು ಇದೇ ವರ್ಷದ ಮೇನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪರಿಚಯದ ಸ್ನೇಹಿತರ ಮೂಲಕ ಭೇಟಿಯಾಗಿದ್ದ ಈ ಜೋಡಿ ನಂತರ ಪರಸ್ಪರ ಇಷ್ಟಪಟ್ಟಿದ್ದರು. ಸಧ್ಯಕ್ಕೆ ಸರಳವಾಗಿ ವಿವಾಹವಾಗುವ ಜಹೀರ್ ಹಾಗೂ ಸಾಗರಿಕಾ ಅವರು ನವೆಂಬರ್ 27ಕ್ಕೆ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ನಲ್ಲಿ ಸ್ನೇಹಿತರು ಮತ್ತು ಕುಟುಂಬದವರಿಗಾಗಿ ಅದ್ಧೂರಿ ಸಮಾರಂಭ ಏರ್ಪಡಿಸಿದ್ದಾರೆ.

ಜೋಡಿಯ ಅಂತರಧರ್ಮ ವಿವಾಹವನ್ನು ಇಬ್ಬರ ಮನೆಯವರು ಸಮ್ಮತಿಸಿದ್ದು, ಪ್ರಜ್ಞಾಪೂರ್ವಕವಾಗಿ ತಾವು ರಿಜಿಸ್ಟರ್ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ಗುರುವಾರ ನಡೆದ ಔತಣ ಕೂಟದಲ್ಲಿ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಆಶಿಶ್ ನೆಹ್ರಾ, ಹರ್ಭಜನ್ ಸಿಂಗ್, ನಿರ್ದೇಶಕ ಅಭಿಶೇಕ್ ಕಪೂರ್ ಮತ್ತು ನಟಿಯರಾದ ವಿದ್ಯಾ ಮಾಳವಾಡೆ, ಹೇಜಲ್ ಕೀಶ್ ಪಾಲ್ಗೊಂಡಿದ್ದರು.

ಈ ವರ್ಷ ಯಾವುದೇ ಕಾರಣಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಲಾಗುವುದಿಲ್ಲ

ಇಂಧನ ಸಚಿನ ಡಿ ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಯಾವುದೇ ಕಾರಣಕ್ಕೆ ಲೋಡ್ ಶೆಡ್ಡಿಂಗ್ ಮಾಡಲಾಗುವುದಿಲ್ಲ ಮತ್ತು ಹೆಚ್ಚಿನ ವಿದ್ಯುತ್ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದರು.

ಲೋಕಸಭಾ ಚುನಾವಣೆ ಸದ್ಯದಲ್ಲೇ ಸಮೀಪಿಸುತ್ತಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಇದೆ ಕಾರಣಕ್ಕಾಗಿಯೇ ಸಿದ್ದರಾಮಯ್ಯ ನಾಯಕತ್ವದ ಕಾಂಗ್ರೆಸ್ ಸರ್ಕಾರ ಸಕಲ ಜನ ಸ್ನೇಹಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

ಸದ್ಯಕ್ಕೆ, ಚಳಿಗಾಲ ಮತ್ತು ಬೇಸಿಗೆಯಲ್ಲಿ ನಾವೆಲ್ಲರೂ ಸಾಮಾನ್ಯವಾಗಿ ಅನುಭವಿಸುವ ಕಷ್ಟವೆಂದರೆ ಲೋಡ್ ಶೆಡ್ಡಿಂಗ್. ಲೋಡ್ ಶೆಡ್ಡಿಂಗ್ ನಿಂದ ಬಳಲುವುದು. ಸದ್ಯಕ್ಕೆ ನಮ್ಮ ಇಂಧನ ಸಚಿವರಾಗಿರುವ ಡಿ ಕೆ ಶಿವಕುಮಾರ್ ಅವರು ಈ ವರ್ಷ ರಾಜ್ಯದಲ್ಲಿ ಯಾವುದೇ ಕಾರಣಕ್ಕೆ ಲೋಡ್ ಶೆಡ್ಡಿಂಗ್ ಅನ್ನು ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದವರ ಪ್ರಶ್ನೆಗೆ ಉತ್ತರಿಸಿರುವ ನಮ್ಮ ಶಿವಕುಮಾರ್ ಅವರು, ವಿದ್ಯುತ್ತಿನ ವಿಚಾರದಲ್ಲಿ ನಾವು ಯಾವುದೇ ರೀತಿಯ ರಾಜಿಯನ್ನು ಮಾಡಿಕೊಳ್ಳುವುದಿಲ್ಲ. ನಮ್ಮ ೩ ವರ್ಷದ ಆಡಳಿತದಲ್ಲಿ ರೈತರಿಗೆ ಉಚಿತ ವಿದ್ಯುತ್ ಅನ್ನು ತಲುಪಿಸಿದ್ದೇವೆ ಮತ್ತು ಇದಕ್ಕೆ ಸರಿ ಸುಮಾರು ೯,೪೦೦ ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಸರ್ಕಾರ ಭರಿಸಿದೆ ಎಂದು ತಿಳಿಸಿದರು. ಇದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕನಿಷ್ಠ ೭ ಗಂಟೆಗಳ ಕಾಲ ವಿದ್ಯುತ್ ಸಂಪರ್ಕವನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ಅಂಕಿ ಅಂಶಗಳು ಸರಿಯಾಗಿಯೇ ಇದ್ದಾರೆ, ನಮ್ಮ ದೇಶದ ಇನ್ನಾವ ರಾಜ್ಯವು ಇಷ್ಟು ವೆಚ್ಚವನ್ನು ವಿದ್ಯುತ್ತಿಗಾಗಿ ಭರಿಸಿಲ್ಲ ಎನ್ನುವುದು ಅಕ್ಷರಸಹ ಸತ್ಯ. ಇದಲ್ಲದೆ ಉತ್ತರ ಕರ್ನಾಟಕದ ರಾಯಬಾಗ ತಾಲೂಕಿನಲ್ಲಿ ಸರಿಸುಮಾರು ೨೫೦ ಕೋಟಿ ರೂಪಾಯಿ ವೆಚ್ಚದ ೪೪೦ ಕೆ ವಿ ಮ್ ಸಾಮರ್ಥ್ಯದ ವಿದ್ಯುತ್ ಉಪಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಮೊಬರ ಎಂಬ ಗ್ರಾಮದಲ್ಲಿ ಕೂಡ ೧೧೦ ಕೆ ಮ್ ವಿ ಸಾಮರ್ಥ್ಯ ಉಳ್ಳ ವಿದ್ಯುತ್ ಸ್ಥಾವರವನ್ನು ನಿರ್ಮಿಸಲಾಗುತ್ತಿದೆ ಮತ್ತು ಮೂಕಲಕೋಡ ಗ್ರಾಮಾಡಲ್ಲಿ ೨೨೦ ಕೆ ವಿ ಮ್ ಸಾಮರ್ಥ್ಯದ ವಿದ್ಯುತ್ ಸ್ಥಾವರದ ನಿರ್ಮಾಣ ಶುರುವಾಗಿದೆ ಎಂದು ತಿಳಿಸಿದರು.

ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಶರಾವತಿ ಪಂಪ್ಡ್ ಶೇಖರಣಾ ಯೋಜನೆಯ ಕೆಳಗೆ ಸುಮಾರು ೨೦೦೦ ಮೆಗಾ ವ್ಯಾಟ್ ವಿದ್ಯುತ್ ಅನ್ನು ತಯಾರಿಸುವಷ್ಟು ಸಾಮರ್ಥ್ಯವುಳ್ಳ ಯೋಜನೆಯನ್ನು ರೂಪಿಸಲಾಗಿದೆ ಮತ್ತು ಶಿವನ ಸಮುದ್ರದಲ್ಲಿ ೨೦೦ ಮೆಗಾ ವ್ಯಾಟ್ ಅಷ್ಟು ವಿದ್ಯುತ್ ಅನ್ನು ತಯಾರಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು. ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಂದ ಸರಿಸುಮಾರು ೭೬೮೫ ಮೆಗಾ ವ್ಯಾಟ್ ಅಷ್ಟು ವಿದ್ಯುತ್ ಅನ್ನು ಉತ್ಪಾದಿಸಲು ಸಕಲ ಯೋಜನೆಗಳನ್ನು ರೂಪಿಸಿರುವ ಬಗ್ಗೆ ಕೂಡ ತಿಳಿಹೇಳಿದರು.

ಡಿಸೆಂಬರ್ 1 ಕ್ಕೆ ಭಾರತ ಬಂಧ್

ಪದ್ಮಾವತಿ ಚಲಚಿತ್ರ ಪ್ರದಶನವನ್ನು ತಡೆಯುವ ಅಂಗವಾಗಿ ರಜಪೂತ್ ಕರ್ನಿ ಸೇನಾ ಡಿಸೆಂಬರ್ ೧ ರಂದು ದೇಶದಾದ್ಯಂತ ಭಾರತ್ ಬಂಧ್ ಅನ್ನು ಸೂಚಿಸಿದೆ.

ಕಟಪ್ಪ ಸತ್ಯರಾಜ್ ಅವರು ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಅವಹೇಳನದ ಮಾತುಗಳನ್ನಾಡಿದ್ದಕ್ಕಾಗಿ, ಅವರು ನಟಿಸಿದ ಚಿತ್ರ ಬಾಹುಬಲಿ ಬಾಗ ಎರಡನ್ನು ಪ್ರದರ್ಶಿಸದಂತೆ ಕರ್ನಾಟಕ ಬಂಧ್ ಮಾಡಬೇಕು ಅಂತ ಹೇಳಿದ್ದು ಒಂದು ವಿಷಯವಾದರೆ, ಸತ್ಯರಾಜ್ ಕ್ಷಮೆಯನ್ನಚಿಸಿದ ಮೇಲೆ ಆ ಚಿತ್ರ ಬಿಡುಗಡೆಯಾಗಿದ್ದು ಮತ್ತೊಂದು ವಿಷಯ.

ಸದ್ಯಕ್ಕೆ ಪ್ರಸ್ತಾಪವಿರುವ ಹೊಸ ವಿಷಯವೇನೆಂದರೆ, ಪದ್ಮಾವತಿ ಚಿತ್ರದ ಪ್ರದರ್ಶನವನ್ನು ಸ್ಥಗಿತ ಗೊಳಿಸಲು ಡಿಸೆಂಬರ್ ಒಂದರಂದು ದೇಶಾದ್ಯಂತ ಭಾರತ ಬಂಧ್ ಬಂಧ್ ಆಚರಿಸಬೇಕು ಎನ್ನುವುದು. ಈ ಬಗ್ಗೆ ರಜಪೂತ್ ಕರ್ನಿ ಸೇನಾ ಸಂಘದವರು ಕರೆ ನೀಡಿದ್ದಾರೆ. ಸಂಘದ ಅಧ್ಯಕ್ಷರ ಹೇಳಿಕೆಯ ಪ್ರಕಾರ (ಲೋಕೇಂದ್ರ ಸಿಂಗ್ ಕಲ್ವಿ) ಈ ದೇಶವ್ಯಾಪ್ತಿ ಬಂಧಿಗೆ ಕೇವಲ ರಜಪೂತ್ ಅವರು ಮಾತ್ರವಲ್ಲ ಮುಸಲ್ಮಾನರು ಕೂಡ ಪದ್ಮಾವತಿ ಚಿತ್ರದ ವಿರುದ್ಧ ದನಿಯೆತ್ತಲಿದ್ದಾರೆ ಎಂದು ತಿಳಿಸಲಾಗಿದೆ.

ಮಾತನ್ನು ಮುಂದುವರಿಸಿರುವ ಅವರು ಈ ವಿಷಯದ ಮದ್ಯಸ್ಥಿಕೆಯನ್ನು ಪ್ರದಾನಿಯವರಾದ ನರೇಂದ್ರ ದಾಮೋದರ್ ಮೋದಿ ಅವರು ಹೋಹಿಸಿಕೊಂಡು ಈ ಚಿತ್ರದ ಬಿಡುಗಡೆಯನ್ನು ಮೂರು ತಿಂಗಳುಗಳ ಕಾಲ ತಡೆಹಿಡಿಯಬೇಕು ಎಂದು ತಿಳಿಸಲಾಗಿದೆ.

ಯಾರು ಈ ಪದ್ಮಾವತಿ? ಪದ್ಮಾವತಿ ಅವರು ರಜಪೂತ ವಂಶದ ಮಹಾರಾಣಿ. ಇದೆ ವಿಷಯದ ಬಗ್ಗೆ ಚಿತ್ರವನ್ನು ನಿರ್ದೇಶಿಸಿರುವ ಸಂಜಯ್ ಲೀಲಾ ಬನ್ಸಾಲಿ ಅವರು ಈ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮಹಾರಾಣಿ ಪದ್ಮಾವತಿ ಅವರಿಗೆ ಸಂಬಂಧವಿತ್ತು ಎನ್ನುವ ರೀತಿಯಲ್ಲಿ ಕಥೆ ಹೆಣೆಯಲಾಗಿದೆ ಎಂದು ರಜಪೂತರ ವಾದ.

ಸದ್ಯಕ್ಕೆ ರಾಜಸ್ತಾನದಲ್ಲಿ ಯಾವುದೇ ಡಿಸ್ಟ್ರಿಬ್ಯೂಟರ್ ಗಳು ಈ ಚಿತ್ರದ ಹಕ್ಕನ್ನು ಖರೀದಿಸಿಲ್ಲ ಮತ್ತು ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಕಾದು ನೋಡಬೇಕಾಗಿದೆ.

ತನ್ನ ಮಗನನ್ನು ಕಳೆದುಕೊಂಡರೂ ಇನ್ನೊಬ್ಬರ ಮಗನನ್ನು ಉಳಿಸಿದ ಪ್ರದ್ಯುಮನ್ ತಂದೆ

ಪ್ರದ್ಯುಮನ್ ಠಾಕುರ್ ಹತ್ಯೆ ಪ್ರಕರಣದಲ್ಲಿ ತಪ್ಪಾಗಿ ಬಂಧನಗೊಂಡಿದ್ದ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ತಾಯಿ ಕೇಳಾದೇವಿ ಅವರ ಕೃತಜ್ಞತೆಯ ನುಡಿ.

ಸೆಪ್ಟೆಂಬರ್ ನಲ್ಲಿ ದೆಹಲಿಯ ರಯಾನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ಪ್ರದ್ಯುಮನ್ ಠಾಕುರ್ ಹತ್ಯೆ ಪ್ರಕರಣದಲ್ಲಿ ಗುರುಗಾವ್ ಪೊಲೀಸರು ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಅವರನ್ನು ಬಂಧಿಸಿದ್ದರು. ಮತ್ತು ಅದೇ ದಿನ ಅಶೋಕ್ ಕುಮಾರ್ ಹತ್ಯೆ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ಅಶೋಕ್ ಕುಮಾರ್ ಮಾಧ್ಯಮಗಳ ಮುಂದೆ ಹಾಗೂ ಪ್ರದ್ಯುಮನ್ ತಂದೆ ಬರುಣ್ ಠಾಕುರ್ ಅವರ ಮುಂದೆ ತಾವು ಹತ್ಯೆ ಮಾಡಿಲ್ಲ ಎಂದು ಪದೇ ಪದೇ ಅಲವತ್ತುಕೊಂಡಿದ್ದರು.

ಅಶೋಕ್ ಕುಮಾರ್ ಅವರನ್ನು ತಪ್ಪಿತಸ್ಥ ಎಂದು ತೋರಿಸುವುದರ ಹಿಂದಿನ ವ್ಯವಸ್ಥಿತ ಯೋಜನೆಯನ್ನು ಅರಿತ ಬರುಣ್ ಅವರು, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪಟ್ಟು ಹಿಡಿದಿದ್ದರು. ಈಗ ಸಿಬಿಐ ಪ್ರಕಾರ ಅಶೋಕ್ ಕುಮಾರ್ ನಿರ್ದೋಷಿ ಎಂದು ಅವರನ್ನು ಬಂಧ ಮುಕ್ತಗೊಳಿಸಲಾಗಿದೆ. ಇದರಿಂದ ಅಶೋಕ್ ಕುಟುಂಬದವರು ನೆಮ್ಮದಿಯ ಉಸಿರಾಡುವಂತಾಗಿದೆ. “ಬರುಣ್ ಠಾಕುರ್ ಅವರು ತಮ್ಮ ಮಗನ ಸಾವಿನ ನ್ಯಾಯಕ್ಕಾಗಿ ಹೋರಾಡಿದ್ದರಿಂದ ನನ್ನ ಮಗನನ್ನು ನಾನು ಮರಳಿ ಪಡೆದಿದ್ದೇನೆ. ಅವರ ಕುಟುಂಬಕ್ಕೆ ನಾನು ಸದಾ ಚಿರಋಣಿ ಆಗಿರುತ್ತೇನೆ.” ಎಂದು ಅಶೋಕ್ ತಾಯಿ ಕೇಳಾದೇವಿ ನುಡಿದಿದ್ದಾರೆ.

“ಅವನು ತನ್ನ ಕುಟುಂಬವನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದ. ತಾನು ಓದಲಿಲ್ಲವಾದ್ದರಿಂದ ತನ್ನ ಮಕ್ಕಳನ್ನು ಒಳ್ಳೆಯ ಶಾಲೆಗೆ ಕಳಿಸಬೇಕೆಂದು ಕಷ್ಟಪಟ್ಟು ದುಡಿಯುತ್ತಿದ್ದ.” ಎಂದು ಕೇಳಾದೇವಿ ಹೇಳಿದ್ದಾರೆ.

ಅಶೋಕ್ ಕುಮಾರ್ ಅವರಿಗೆ 5 ಹಾಗು 8 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. “ನಮ್ಮ ತಂದೆ ತುಂಬಾ ಒಳ್ಳೆಯ ವ್ಯಕ್ತಿ. ಒಂದು ಬಾರಿಯೂ ನಮ್ಮನ್ನು ಹೊಡೆದವರಲ್ಲ. ಅಂಥವರು ಬೇರೆ ಬಾಲಕನನ್ನು ಹೇಗೆ ಹತ್ಯೆ ಮಾಡಲು ಸಾಧ್ಯ?” ಎಂದು ಅವರ ಹಿರಿಯ ಮಗ ಹೇಳುತ್ತಾನೆ.

ಅಶೋಕ್ ಅವರ ಬಂಧನದಿಂದ ಅವರ ಕುಟುಂಬ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಮಕ್ಕಳಿಗೆ ಬಟ್ಟೆಗಳನ್ನು ತರಲು ಹಣವಿಲ್ಲ, ಇದನ್ನೆಲ್ಲ ಯಾರು ನಷ್ಟ ಭರಿಸುತ್ತಾರೆ ಎಂದು ಅಶೋಕ್ ಪತ್ನಿ ಮಮತಾ ಪ್ರಶ್ನಿಸುತ್ತಾರೆ. ಏನೂ ತಪ್ಪು ಮಾಡದ ಅಶೋಕ್ ಕುಮಾರ್ ಅವರನ್ನು ಬಂಧಿಸಿ ಹಿಂಸಿಸಿದ್ದಕ್ಕಾಗಿ ಗುರುಗಾವ್ ಪೊಲೀಸರ ಮೇಲೆ ಪ್ರಕರಣ ದಾಖಲಿಸಲು ಅವರ ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾರೆ.

ಆಂಧ್ರದಲ್ಲಿ ದೋಣಿ ಮುಳುಗಿ 19 ಸಾವು

ಕೃಷ್ಣಾ ನದಿಯಲ್ಲಿ ದುಃಸ್ಥಿತಿಯಲ್ಲಿದ್ದ ಪ್ರವಾಸಿ ದೋಣಿ ಚಾಲಕನ ತಪ್ಪಿನಿಂದ ಮಗುಚಿಕೊಂಡು ಹಲವು ಪ್ರವಾಸಿಗರ ಸಾವಿಗೆ ಕಾರಣವಾಗಿದೆ.

ವಿಜಯವಾಡದ ಬಳಿ ಇಬ್ರಾಹಿಂಪಟ್ಟಣದಲ್ಲಿ ಜನರಿಂದ ತುಂಬಿದ್ದ ಪ್ರವಾಸಿ ದೋಣಿಯೊಂದು ಕೃಷ್ಣಾ ನದಿಯಲ್ಲಿ ಭಾನುವಾರ ಸಂಜೆ ಮಗುಚಿ ಬಿದ್ದಿದ್ದು ಕನಿಷ್ಟ 19 ಜನರು ಸಾವಿಗೀಡಾಗಿದ್ದಾರೆ. ನದಿ ಬದಿಯನ್ನು ತಲುಪುವ ಕೆಲವೇ ಕ್ಷಣಗಳ ಮುಂಚೆ ದೋಣಿಯು ಮಗುಚಿದೆ. ಕತ್ತಲೆ ಆವರಿಸುತ್ತಿದ್ದರಿಂದ ಚಾಲಕನಿಗೆ ನೀರಿನ ಆಳ ತಿಳಿಯದೆ ದೋಣಿಯನ್ನು ತಿರುಗಿಸಿದ್ದರಿಂದ, ದೋಣಿ ದಡದ ಮಣ್ಣಿಗೆ ಬಡಿದು ಮಗುಚಿ ಬಿದ್ದಿರಬಹುದೆಂದು ಹೇಳಲಾಗುತ್ತಿದೆ.

ದೋಣಿಯಲ್ಲಿ 38 ಜನರು ಪ್ರಯಾಣಿಸುತ್ತಿದ್ದು, 16 ಮಂದಿಯನ್ನು ರಕ್ಷಿಸಲಾಗಿದ್ದು 19 ಮೃತ ದೇಹಗಳು ದೊರೆತಿವೆ. ಪ್ರಯಾಣಿಕರು ಭವನಿ ದ್ವೀಪದಿಂದ ವಿಜಯವಾಡದ ಬಳಿಯಿರುವ ಪವಿತ್ರ ಸಂಗಂಗೆ ಹೋಗುತ್ತಿದ್ದರು. ದೋಣಿ ಮಾಲೀಕರು ನಿಯಮಗಳ ಅನುಸಾರ ಜೀವರಕ್ಷಕ ಜಾಕೆಟ್ ಗಳನ್ನು ಒಡಗಿಸಬೇಕಾಗಿದ್ದು, ಆದರೆ ಅವರು ಪ್ರಯಾಣಿಕರಿಗೆ ಜಾಕೆಟ್ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.

ಪ್ರಯಾಣಿಕರೆಲ್ಲರು ಒಂಗೋಲ್ ವಾಕಿಂಗ್ ಕ್ಲಬ್ ಸದಸ್ಯರಾಗಿದ್ದು ಖಾಸಗಿ ದೋಣಿಯನ್ನು ಬಾಡಿಗೆಗೆ ಪಡೆದಿದ್ದರೆನ್ನಲಾಗಿದೆ. ಅವರೆಲ್ಲ ಒಂಗೋಲ್ ನಿಂದ ವಿಜಯವಾಡಕ್ಕೆ ಪ್ರವಾಸಕ್ಕೆ ಬಂದಿದ್ದು, ಸುತ್ತ ಮುತ್ತಲಿನ ದೇವಸ್ಥಾನಗಳನ್ನು ನೋಡಿಕೊಂಡು ಸಂಜೆ  ದೋಣಿ ವಿಹಾರ ಮಾಡಲು ಬಂದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ದುರಂತಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಪ್ರತಿಯೊಬ್ಬ ಮೃತರಿಗೆ ಗೃಹಮಂತ್ರಿ ಚಿನ್ನರಾಜಪ್ಪ ಅವರು 8 ಲಕ್ಷ ಪರಿಹಾರ ಘೋಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೇಲೆ ನಿರ್ಲಕ್ಷ್ಯದ ಆರೋಪ ದಾಖಲಿಸಲಾಗಿದೆ.

ನಯಾಗರ ಜಲಪಾತವನ್ನು ಇನ್ನು ಬೆಂಗಳೂರಿನಲ್ಲೆ ನೋಡಬಹುದು!

ಬೆಂಗಳೂರಿನ ಲಾಲ್ಬಾಗ್ ಉದ್ಯಾನದಲ್ಲಿ ಚಿಕ್ಕ ನಯಾಗರ ಜಲಪಾತವನ್ನು ರಾಜ್ಯ ತೋಟಗಾರಿಕೆ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿದೆ.

ಲಾಲ್ಬಾಗ್ ಬೆಂಗಳೂರಿನ ಹೆಮ್ಮೆಯ ಪ್ರತೀಕ. ಅಲ್ಲಿ ನಡೆಯುವ ಫಲ ಪುಷ್ಪ ಪ್ರದರ್ಶನವಂತೂ ತುಂಬಾ ಪ್ರಸಿದ್ಧ. ಸ್ವಾತಂತ್ರ ದಿನದ ಸಮಯದಲ್ಲಿ ನಡೆಸುವ ಪ್ರದರ್ಶನದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ನೂಕು ನುಗ್ಗಲು ಇರುತ್ತದೆ. ಈ ಬಾರಿಯಂತು ಕುವೆಂಪುರವರ ಕವಿಶೈಲದ ಮನೆಯನ್ನು ಪುಷ್ಪಗಳಿಂದ ನಿರ್ಮಿಸಿದ್ದು ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನು ಮುಂದೆ ಲಾಲ್ಬಾಗ್ ಉದ್ಯಾನಕ್ಕೆ ಇನ್ನೊಂದು ಪ್ರಮುಖ ಆಕರ್ಷಣೆ ಸೇರ್ಪಡೆ ಆಗಲಿದೆ. ಚಿಕ್ಕ ನಯಾಗರ ಜಲಪಾತವನ್ನು ಉದ್ಯಾನದಲ್ಲಿ ಸೃಷ್ಟಿಸಲು ಸುಮಾರು ಒಂದು ವರ್ಷದಿಂದ ಕಾರ್ಯ ನಡೆಯುತ್ತಿದೆ. ರಾಜ್ಯ ತೋಟಗಾರಿಕೆ ಇಲಾಖೆಯ ವತಿಯಿಂದ ಇದನ್ನು ನಿರ್ಮಿಸಲಾಗುತ್ತಿದ್ದು ಇದಕ್ಕೆ 2.7 ಕೋಟಿ ವ್ಯಯಿಸಲಾಗುತ್ತಿದೆಯೆಂದು ವರದಿಯಾಗಿದೆ.

ನಯಾಗರ ಜಲಪಾತವು ಅಮೆರಿಕ ಮತ್ತು ಕೆನಡ ದೇಶಗಳ ಗಡಿಯಲ್ಲಿದ್ದು ಅಲ್ಲಿಯ ಪ್ರವಾಸೋದ್ಯಮದ ಮುಖ್ಯ ಆಕರ್ಷಣೆಗಳಲ್ಲೊಂದು. ಲಾಲ್ಬಾಗ್ ಉದ್ಯಾನದಲ್ಲಿ ನಿರ್ಮಿಸಲಾಗುತ್ತಿರುವ ಕೃತಕ ಜಲಪಾತ 125 ಅಡಿ ಅಗಲ ಹಾಗು 25 ಅಡಿ ಎತ್ತರ ಇರಲಿದೆ. ಪ್ರಸ್ತುತ ಲಾಲ್ಬಾಗ್ ಕೆರೆಯಿಂದ ಜಲಪಾತಕ್ಕೆ ನೀರು ಹರಿಸುವ ಯೋಜನೆಯಿದೆ.

ಜಲಪಾತವು ಕೇವಲ ಜನಾಕರ್ಷಣೆಗಷ್ಟೇ ಅಲ್ಲದೆ, ಕೆರೆಯಲ್ಲಿರುವ ಸೂಕ್ಷ್ಮ ಹಸಿರು ಪಾಚಿಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕೆರೆ ಸೇರುತ್ತಿರುವ ಸಂಸ್ಕರಿಸದ ಚರಂಡಿ ನೀರಿನಲ್ಲಿರುವ ನೈಟ್ರೋಜನ್ ಹಾಗು  ಫಾಸ್ಫರಸ್ ಪಾಚಿಯ ತೀವ್ರ ಅಭಿವೃದ್ಧಿಗೆ ಕಾರಣವಾಗಿದ್ದು, ಕೆರೆಯಲ್ಲಿರುವ ಜಲಚರಗಳಿಗೆ ಹಾನಿಯಾಗುತ್ತಿದೆ. ಪಾಚಿಯಿಂದ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಪಕ್ಷಿಗಳಿಗೆ ಆಹಾರ ಕಾಣದಂತಾಗಿ, ಉದ್ಯಾನದಲ್ಲಿ ಪಕ್ಷಿ ಸಂಖ್ಯೆ ಕಡಿಮೆ ಆಗುತ್ತಿದೆ. ಜಲಪಾತಕ್ಕೆ ನೀರು ಹರಿಸುವುದರಿಂದ ಯಾವುದೆ ರಾಸಾಯನಿಕಗಳಿಲ್ಲದೆ ಪಾಚಿಯನ್ನು ತಡೆಗಟ್ಟಬಹುದಾಗಿದೆ.

ಈಗಾಗಲೆ ಜಲಪಾತ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಮುಂದಿನ ಜನವರಿ ಅಷ್ಟರಲ್ಲಿ ಜಲಪಾತ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ.